Thursday, May 26, 2011

ಪತ್ರಕರ್ತರ ಪ್ರಶಸ್ತಿಯನ್ನು ಪತ್ರಿಕೋದ್ಯಮಿಗಳು ಪಡೆಯುವುದು ಎಷ್ಟು ಸರಿ?

ಪ್ರಜಾವಾಣಿಯ ನಿವೃತ್ತ ಸಹಾಯಕ ಸಂಪಾದಕ ಹಾಗು ಸಾಹಿತಿ ರಂಜಾನ್ ದರ್ಗಾ ಅವರು ಎರಡು ಘಟನೆಗಳು: ಉತ್ತರಿಸಲು ಸಾಧ್ಯವಾಗದ ಹಲವು ಪ್ರಶ್ನೆಗಳು ಎಂಬ ಲೇಖನಕ್ಕೆ ನೀಡಿರುವ ಒಂದು ಪ್ರತಿಕ್ರಿಯೆ ಗಂಭೀರ ಪ್ರಶ್ನೆಯೊಂದನ್ನು ಹುಟ್ಟುಹಾಕಿದೆ. ಮೀಡಿಯಾ ಸಂಸ್ಥೆಗಳ ಮಾಲೀಕರು ಪತ್ರಕರ್ತರಿಗೆ ಕೊಡಲಾಗುವ ಪ್ರಶಸ್ತಿಗಳನ್ನು ಪಡೆಯುವುದು ಸರಿಯೇ ಎಂಬುದು ಈ ಬಹುಮುಖ್ಯವಾದ ಪ್ರಶ್ನೆ.

ನಿಜ, ಇಂಥದ್ದೊಂದು ಟ್ರೆಂಡ್ ಚಾಲ್ತಿಯಲ್ಲಿದೆ. ಇದನ್ನು ನಾವು ಸಬ್ಜೆಕ್ಟಿವ್ ಆಗಿ ಚರ್ಚಿಸುವುದು ಒಳ್ಳೆಯದು ಅನಿಸುತ್ತದೆ. ಹಿಂದೆ ಹೀಗೆ ಪ್ರಶಸ್ತಿ ಪಡೆದವರು ಯಾರು? ಯಾಕೆ? ಹೇಗೆ? ಇತ್ಯಾದಿ ಪ್ರಶ್ನೆಗಳು ಸದ್ಯಕ್ಕೆ ಇಲ್ಲಿ ಬೇಕಾಗಿಲ್ಲ. ಮಾಲೀಕರು ಪತ್ರಕರ್ತರ ಹೆಸರಿನ ಪ್ರಶಸ್ತಿ ಪಡೆಯುವುದು ಸರಿಯೇ ತಪ್ಪೇ ಎಂಬುದಷ್ಟೇ ನಮ್ಮ ಚರ್ಚೆಯ ವಿಷಯವಾಗಲಿ ಎಂಬುದು ನಮ್ಮ ಇಂಗಿತ.

ರಂಜಾನ್ ದರ್ಗಾ
ಮಾಧ್ಯಮ ಕ್ಷೇತ್ರಕ್ಕೆ ನೀಡಲಾಗುವ ಪ್ರಶಸ್ತಿಗಳನ್ನು ಪತ್ರಿಕಾ ಸಂಸ್ಥೆಗಳ ಮಾಲೀಕರಿಗೆ ನೀಡುವುದು ಸರ್ಕಾರಕ್ಕೆ ಮತ್ತು ಸರ್ಕಾರದ ಅಧೀನದಲ್ಲಿರುವ ಮಾಧ್ಯಮ ಅಕಾಡೆಮಿಯಂಥ ಸಂಸ್ಥೆಗಳಿಗೆ ಅತ್ಯಂತ ಸುಲಭದ, ಲಾಭದಾಯಕ ತೀರ್ಮಾನವಾಗಬಹುದು. ಇತ್ತೀಚಿಗೆ ಪತ್ರಕರ್ತರಿಗೆ ಪ್ರಶಸ್ತಿಗಳನ್ನು ನೀಡುವ ಮೂಲಕ ಅವರನ್ನು ಬುಟ್ಟಿಗೆ ಹಾಕಿಕೊಳ್ಳುವ ಕ್ರಿಯೆಯೇ ಕಣ್ಣಿಗೆ ರಾಚುವಂತೆ ಕಂಡುಬರುತ್ತಿದೆ. ಕಳೆದ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಪತ್ರಕರ್ತರನ್ನು ಆಯ್ಕೆ ಮಾಡುವ ಅನುಭವ, ಹಿರಿತನ, ಯೋಗ್ಯತೆಗಳಿಗಿಂತ ಹೆಚ್ಚಾಗಿ ಮಾಧ್ಯಮ ಕ್ಷೇತ್ರಗಳಲ್ಲಿ ಆಯಕಟ್ಟಿನ ಸ್ಥಾನಗಳಲ್ಲಿರುವವರನ್ನೇ ಪರಿಗಣಿಸಿದ್ದನ್ನು ನಾವು ಗಮನಿಸಿದ್ದೇವೆ. ಮಾತ್ರವಲ್ಲದೆ ಪ್ರತಿ ಮಾಧ್ಯಮಕ್ಕೂ ಒಂದು ಪ್ರಶಸ್ತಿ ಎಂಬಂಥ ವಿಚಿತ್ರ ಮಾನದಂಡವನ್ನಿಟ್ಟುಕೊಂಡು ಪ್ರಶಸ್ತಿಗಳನ್ನು ಹಂಚಿದ್ದು ಢಾಳಾಗಿ ಕಾಣಿಸಿತು. ಸರ್ಕಾರ ಹೀಗೆ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ತನ್ನ ಲಾಭ-ನಷ್ಟದ ಲೆಕ್ಕಾಚಾರಗಳನ್ನು ಯೋಚಿಸುವಾಗ ಸಹಜವಾಗಿಯೇ ಮಾಧ್ಯಮ ಸಂಸ್ಥೆಗಳ ಒಟ್ಟಾರೆ ಹೊಣೆ ಹೊತ್ತ ಮಾಲೀಕರನ್ನು ಆಯ್ಕೆ ಮಾಡುವುದು ಅತ್ಯಂತ ಸಲೀಸಾದ ನಿರ್ಧಾರವಾಗಬಹುದು.

ಇಲ್ಲಿ ಎರಡು ಬಹುಮುಖ್ಯ ಪ್ರಶ್ನೆಗಳಿವೆ. ಒಂದು, ಪತ್ರಕರ್ತರ ಪ್ರಶಸ್ತಿಯನ್ನು ಸಂಸ್ಥೆಗಳ ಮಾಲೀಕರು, ಮ್ಯಾನೇಜ್‌ಮೆಂಟ್ ಹುದ್ದೆಗಳಲ್ಲಿರುವವರು ಪಡೆಯುವುದು ತಾಂತ್ರಿಕವಾಗಿ ಎಷ್ಟು ಸರಿ ಎಂಬುದು ಮೊದಲ ಪ್ರಶ್ನೆ. ಪತ್ರಿಕಾ ಸಂಸ್ಥೆಗಳ ಮಾಲೀಕರು ಪತ್ರಿಕೋದ್ಯಮಿಗಳೇ ಹೊರತು ಸಂಬಳ ಪಡೆದು ಹಗಲು-ರಾತ್ರಿ ದುಡಿಯುವ ಪತ್ರಕರ್ತರಾಗಿರುವುದಿಲ್ಲ. ಪತ್ರಿಕೋದ್ಯಮಿಗಳೇ ಪತ್ರಕರ್ತರಾಗಿರುವ ಸಣ್ಣ ಪತ್ರಿಕೆಗಳ ಮಾಲೀಕರಿದ್ದಾರೆ, ಅವರ ವಿಷಯ ಬೇರೆ. ಇವರು ಡಿಟಿಪಿ ಮಾಡುವುದರಿಂದ (ಹಿಂದೆ ಮೊಳೆ ಜೋಡಿಸುವುದರಿಂದ) ಹಿಡಿದು ಪೇಪರ್ ಬಂಡಲ್ ಹೊರುವವರೆಗೆ ಎಲ್ಲ ಕೆಲಸಗಳನ್ನು ಮಾಡುತ್ತಾರೆ. ನಾವು ಇವರ ವಿಷಯ ಚರ್ಚಿಸುತ್ತಿಲ್ಲ. ದೊಡ್ಡ ಮಾಧ್ಯಮಗಳ ಮಾಲೀಕರು ರಿಪೋರ್ಟಿಂಗ್ ಮಾಡುವವರಲ್ಲ, ಕಾಪಿ ತಿದ್ದುವವರಲ್ಲ, ವಿನ್ಯಾಸ ಮಾಡುವವರಲ್ಲ, ಮತ್ತೊಂದು-ಮಗದೊಂದು ಮಾಡುವವರಲ್ಲ. ಹೀಗಿರುವಾಗ ಇವರು ಪತ್ರಕರ್ತರ ಪ್ರಶಸ್ತಿಯನ್ನು ಪಡೆಯುವುದು ತಾಂತ್ರಿಕವಾಗಿ ಎಷ್ಟು ಸರಿ? ಪತ್ರಿಕಾ ಸಂಸ್ಥೆಗಳ ಮಾಲೀಕರನ್ನು ಉದ್ಯಮಿಗಳು ಎಂದೇ ಪರಿಗಣಿಸಿ ಉದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶಸ್ತಿಗಳಿಗೆ ಆಯ್ಕೆ ಮಾಡುವುದು ಸರಿಯಾದ ಮಾರ್ಗವಲ್ಲವೆ?

ಎರಡನೆಯದು ನೈತಿಕ ಪ್ರಶ್ನೆ. ಮಾಧ್ಯಮ ಸಂಸ್ಥೆಯ ಮಾಲೀಕರು, ಕಾರ್ಯ ನಿರ್ವಾಹಕ ಅಧಿಕಾರಿಗಳು ಪ್ರಶಸ್ತಿ ಪಡೆದರೆ, ಒಬ್ಬ ಪತ್ರಕರ್ತನಿಗೆ ನ್ಯಾಯಯುತವಾದ ಹಕ್ಕನ್ನು ಕಿತ್ತುಕೊಂಡಂತಾಗುವುದಿಲ್ಲವೆ?

ಇದು ಪ್ರಶಸ್ತಿಗಳಿಗೆ ಮಾತ್ರವಲ್ಲ, ಪತ್ರಕರ್ತರಿಗೆ ದೊರೆಯುವ ಎಲ್ಲ ಸೌಲಭ್ಯಗಳಿಗೂ ಅನ್ವಯಿಸಿಕೊಂಡು ನಾವು ನೋಡಬಹುದಾಗಿದೆ.

ದಯವಿಟ್ಟು ಈ ಚರ್ಚೆಯಲ್ಲಿ ಪಾಲ್ಗೊಳ್ಳಿ ಮತ್ತು ಓಟ್ ಮಾಡಿ. ಚರ್ಚೆ ವ್ಯಕ್ತಿಗಳ, ಸಂಸ್ಥೆಗಳ ಸುತ್ತ ಹರಿದಾಡುವ ಬದಲು ವಿಷಯದ ಸುತ್ತಲೇ ಇರಲಿ ಎಂಬುದು ನಮ್ಮ ಮನವಿ.

8 comments:

  1. Shiva sharanarige namaskaar,
    Olleya vichara saar edu !

    ReplyDelete
  2. idu samanayakke nadedu kondu bandiro sampradaya embantagi hogide.jilla mattada patrika sampadakarenisikondavaru patrikege duddu hakodanna (patrikeya hesarinalle duddu madiddu) berenoo madtirodilla.. hagaliruloo kannige enne bitkondu kelsa madorige sariyada soulabhyanu kodade satayisoru ee reethiya prashastigalanna naachike illade padeyuttare (sweekarisuttare annoke manasu opputtilla)ee vyavasthe sari alla. idu nijavada patrakartana hakkanna, avana prathibhege sikkabekada gouravavanna, manyatheyanna kittukondante...

    ReplyDelete
  3. ಹಾಲಿವುಡ್ ಚಿತ್ರರಂಗದಲ್ಲಿ ಶ್ರೇಷ್ಟ ಚಿತ್ರಗಳಿಗೆ ಆಸ್ಕರ್ ನೀಡುವಂತೆ ಇದಕ್ಕೆ ವ್ಯತಿರಿಕ್ತವಾಗಿ ಕೆಟ್ಟ ಚಿತ್ರಗಳಿಗೂ, ನಟನಟಿಯರಿಗೂ ಕೆಟ್ಟ ಚಿತ್ರ, ಕಳಪೆ ನಟ ನಟಿ ಅಂತ ಪ್ರಶಸ್ತಿ ನೀಡುವ ಪದ್ದತಿಯಿದೆ. ಈ ಪದ್ದತಿಯನ್ನು ರಾಜ್ಯದ ಪತ್ರಿಕೋದ್ಯಮಕ್ಕೂ ವಿಸ್ತರಿಸಿದರೆ ಕೆಟ್ಟ ವರದಿ, ಕಳಪೆ ವರದಿಗಾರ ಎಂಬೆಲ್ಲ ಪ್ರಶಸ್ತಿಗಳನ್ನೂ ನೀಡುವ ವ್ಯವಸ್ಥೆಯೊಂದು ಆಗಬೇಕಿದೆ. ಅಫ್ ಕೋರ್ಸ್ ಈ ಕಳಪೆ ಪ್ರಶಸ್ತಿಗಳಿಗೆ ಲಾಯಕ್ಕಾಗಿರುವ 80 ಪ್ರತಿಶತ ವರದಿಗಾರರು ಲೇಖನಗಳು, ಸುದ್ದಿಗಳು, ಪ್ರತಿನಿತ್ಯವೂ ಪ್ರಕಟವಾಗುತ್ತಿವೆ, ಪ್ರಸಾರವಾಗುತ್ತಿವೆ. ಯಾರಾದರೂ ಈ ಬಗೆಯ ಪ್ರಶಸ್ತಿ ಸ್ಥಾಪನೆಗೆ ಮುಂದೆ ಬಂದರೆ ಅರ್ಧ ಪ್ರಶಸ್ತಿ ಫಲಕಗಳನ್ನು ನಾವೇ ಎಲ್ಲಿಯಾದರೂ ಹೊಂಚಿ ಪ್ರಶಸ್ತಿ ನೀಡಿ ಆ ಮೂಲಕವಾದರೂ ಈ ಎಳಸು ಪ್ರತಿಭೆಗಳಿಗೆ ಛೀಮಾರಿ ಹಾಕಬಹುದು. ಟಿ.ಕೆ. ದಯಾನಂದ

    ReplyDelete
  4. ಪ್ರಶಸ್ತಿಗಳನ್ನು ಕೊಡುವುದು ತೆಗೆದು ಕೊಳ್ಳುವುದುದರಲ್ಲಿ ತಪ್ಪೇನಿಲ್ಲ. ಆದರೆ ಅದು ಅರ್ಹತೆಯಿರುವವರಿಗೆ ಸಿಗಬೇಕು. ಹಾಗೆಯೇ ಅದು ವ್ಯಕ್ತಿಗಳಿಗೆ ಮತ್ತು ಅವರ ಕೆಲಸಗಳಿಗೆ ಸ್ಪೂರ್ತಿ ತುಂಬುವಂತಿರಬೇಕು.

    ReplyDelete
  5. ಪತ್ರಿಕೋದ್ಯಮಿಗಳಲ್ಲೂ ಎರಡು ವಿಧದವರಿದ್ದಾರೆ ನೋಡಿ: ಒಬ್ಬರು ನೀವಂದಂತೆ ಪ್ರಾಯೋಗಿಕ ಪತ್ರಿಕೋದ್ಯಮದ ಗಂಧಗಾಳಿ ಇಲ್ಲದವರು. ಇನ್ನೊಬ್ಬರು ಪತ್ರಿಕೆಯ ಸರ್ವಸ್ವವೂ ಆಗಿರುವವರು. ಜಿಲ್ಲೆ ಹಾಗೂ ತಾಲೂಕು ಮಟ್ಟದ ಪತ್ರಿಕೆಗಳನ್ನು ನಡೆಸುವವರನ್ನು ಗಮನದಲ್ಲಿಟ್ಟುಕೊಂಡು ಇದನ್ನು ಹೇಳುತ್ತಿದ್ದೇನೆ. ಈ ಬಗೆಯ ಅನೇಕ ಪತ್ರಿಕೆಗಳಲ್ಲಿ ಮಾಲೀಕ, ಪ್ರಕಾಶಕ, ಸಂಪಾದಕ, ಮುದ್ರಕ, ವರದಿಗಾರ, ಜಾಹೀರಾತು ಸಂಗ್ರಾಹಕ, ಪತ್ರಿಕಾ ವಿತರಕ... ಎಲ್ಲವೂ ಒಬ್ಬರೇ ಅಗಿರುವುದೂ ಇದೆ. ಪತ್ರಿಕೋದ್ಯಮವನ್ನು ಸಂಪೂರ್ಣ ಕಾಯಕ ನಿಷ್ಠೆಯಿಂದ ನಡೆಸಿಕೊಂಡುಹೋಗುವ ಅನೇಕ ಮಂದಿ ಈ ಗುಂಪಿನೊಳಗಿದ್ದಾರೆ. ಅಂಥವರನ್ನು ಗುರುತಿಸಿ ಪ್ರಶಸ್ತಿ ನೀಡುವುದರಲ್ಲಿ ಏನೂ ತಪ್ಪಿಲ್ಲ ಎನಿಸುತ್ತದೆ. ಪತ್ರಿಕೋದ್ಯಮ ಎಂದ ತಕ್ಷಣ ರಾಜ್ಯಮಟ್ಟದಲ್ಲಿ ಕಾಣುವ ಎಂಟ್ಹತ್ತು ದೊಡ್ಡ ಪತ್ರಿಕೆಗಳನ್ನು ಮಾತ್ರ ಪರಿಗಣಿಸುವುದು ಬೇಡ...

    ReplyDelete
  6. Dr.Prakash G. KhadeJune 6, 2011 at 9:44 PM

    Sariyaada vichaara, e bagge vyapaka chercheyagali.

    ReplyDelete